ಕಳೆದ ಜನವರಿ 29, 2026ರಂದು ಪ್ರತಿ 10 ಗ್ರಾಂಗೆ ದಾಖಲೆಯ ₹1,80,779 ರೂ. ಮುಟ್ಟಿದ್ದ ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (MCX) ಚಿನ್ನದ ಬೆಲೆಯು ಈಗ ಬರೋಬ್ಬರಿ ₹38,600ಕ್ಕೂ ಹೆಚ್ಚು ಕುಸಿದಿದೆ. ಶುಕ್ರವಾರದಂದು ಚಿನ್ನದ ಫ್ಯೂಚರ್ಸ್ ಬೆಲೆಯು ₹1,42,024 ಕ್ಕೆ ಸ್ಥಿರಗೊಂಡಿದ್ದು, ಇದು ತನ್ನ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಶೇ. 21.43ರಷ್ಟು ಇಳಿಕೆಯಾಗಿದೆ. ಅಕ್ಟೋಬರ್ ತಿಂಗಳಲ್ಲಿ ಒಂದರಲ್ಲೇ ಹಳದಿ ಲೋಹದ ಬೆಲೆಯು ಶೇ. 4.7ರಷ್ಟು ಕುಸಿದಿದ್ದು, ಅಮೂಲ್ಯ ಲೋಹಗಳ ಮೇಲೆ ತೀವ್ರ ಒತ್ತಡವಿರುವುದನ್ನು ಇದು ತೋರಿಸುತ್ತದೆ.
ಮಾರುಕಟ್ಟೆ ತಜ್ಞರ ಪ್ರಕಾರ, ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ, ಕಚ್ಚಾ ತೈಲ ಬೆಲೆಯಲ್ಲಿ ಏರಿಕೆ ಮತ್ತು ಅಮೆರಿಕದ ಹಣದುಬ್ಬರದ ನಿರಂತರ ಕಳವಳಗಳಿಂದಾಗಿ ಈ ವಾರ ಸರಕು ಮಾರುಕಟ್ಟೆಯಲ್ಲಿ (Commodity Market) ಭಾರೀ ಏರಿಳಿತ ಕಂಡುಬಂದಿದೆ. ಇಂಧನ ಬೆಲೆಗಳು ಹೆಚ್ಚಿರುವುದು ಹಣಕಾಸು ನೀತಿಗಳು ಮತ್ತಷ್ಟು ಕಠಿಣವಾಗಿರಬಹುದು ಎಂಬ ನಿರೀಕ್ಷೆಯನ್ನು ಬಲಪಡಿಸಿದ್ದು, ಚಿನ್ನ ಹಾಗೂ ಬೆಳ್ಳಿಯ ಬೆಲೆಗೆ ಹಿನ್ನಡೆಯುಂಟು ಮಾಡಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಈ ವಾರ ಚಿನ್ನದ ಬೆಲೆ ಸುಮಾರು ಶೇ. 4ರಷ್ಟು ಕುಸಿದಿದೆ. ಇದು ಜೂನ್ ತಿಂಗಳ ಬಳಿಕ ಕಂಡುಬಂದ ಅತ್ಯಂತ ದೊಡ್ಡ ಸಾಪ್ತಾಹಿಕ ಇಳಿಕೆಯಾಗಿದ್ದು, ಜುಲೈ ಮಧ್ಯಭಾಗದ ನಂತರ ಮೊದಲ ಬಾರಿಗೆ ಪ್ರತಿ ಔನ್ಸ್‌ಗೆ ಮಾನಸಿಕವಾಗಿ ಮಹತ್ವದ ಮಟ್ಟವಾದ $4,000 ಕ್ಕಿಂತ ಕೆೆಳಗೆ ಕುಸಿದಿದೆ. ಶುಕ್ರವಾರ ಬೆಳ್ಳಿಯ ಬೆಲೆಯೂ ದುರ್ಬಲಗೊಂಡು ಪ್ರತಿ ಔನ್ಸ್‌ಗೆ ಸುಮಾರು $54 ರಂತೆ ವಹಿವಾಟು ನಡೆಸಿದೆ.
AI ಷೇರುಗಳ ಕುಸಿತದ ಬಿಸಿ:
ಸರಕು ಮಾರುಕಟ್ಟೆ ತಜ್ಞರ ಪ್ರಕಾರ, ಅಮೆರಿಕದ ತಂತ್ರಜ್ಞಾನ ಷೇರುಗಳಲ್ಲಿ, ಅದರಲ್ಲೂ ವಿಶೇಷವಾಗಿ AI (ಕೃತಕ ಬುದ್ಧಿಮತ್ತೆ) ಆಧಾರಿತ ಕಂಪನಿಗಳಲ್ಲಿ ಉಂಟಾದ ಹಿನ್ನಡೆಯು ಈ ಮಾರಾಟದ ಭರಾಟೆಯನ್ನು ಇನ್ನಷ್ಟು ಹೆಚ್ಚಿಸಿತು. ಇದು ಮಾರ್ಜಿನ್ ಕಾಲ್‌ಗಳಿಗೆ ಕಾರಣವಾಗಿದ್ದು, ಹೂಡಿಕೆದಾರರು ತಮ್ಮ ಜವಾಬ್ದಾರಿಗಳನ್ನು ಪೂರೈಸಲು ಚಿನ್ನದ ಮೇಲಿನ ತಮ್ಮ ಹೂಡಿಕೆಯನ್ನು ಅನಿವಾರ್ಯವಾಗಿ ಮಾರಾಟ ಮಾಡುವಂತೆ ಮಾಡಿತು. ಇದರಿಂದ ಚಿನ್ನ ಮತ್ತು ಬೆಳ್ಳಿಯ ಮೇಲೆ ಮಾರಾಟದ ಒತ್ತಡ ಮತ್ತಷ್ಟು ಹೆಚ್ಚಾಯಿತು.
ಹಾಗಿದ್ದರೂ, ಈ ಬೆಲೆ ಕುಸಿತವು ಭೌತಿಕ ಮಾರುಕಟ್ಟೆಯಲ್ಲಿ (Physical Market) ಹೊಸ ಖರೀದಿಯ ಅವಕಾಶಗಳನ್ನು ಸೃಷ್ಟಿಸಿದೆ. ಭಾರತದಲ್ಲಿ ಕಡಿಮೆ ಬೆಲೆಯು ದೀಪಾವಳಿ/ದಸರಾ ಹಬ್ಬದ ಸಂದರ್ಭದಲ್ಲಿ ಭೌತಿಕ ಚಿನ್ನದ ಖರೀದಿಗೆ ಕೊಂಚ ಉತ್ತೇಜನ ನೀಡಿದೆ. ಆದರೆ, ಮಾರುಕಟ್ಟೆ ತಜ್ಞರ ಪ್ರಕಾರ ಚೀನಾದಲ್ಲಿ ಆಭರಣಗಳ ಬೇಡಿಕೆ ಮಾತ್ರ ಇನ್ನೂ ಮಂದವಾಗಿಯೇ ಇದೆ. ಒಟ್ಟಾರೆಯಾಗಿ, ಭೌತಿಕ ಚಿನ್ನದ ಖರೀದಿಯ ಬೆಂಬಲ ಹಾಗೂ ಕಚ್ಚಾ ತೈಲ ಬೆಲೆ ಏರಿಕೆ, ಹಣದುಬ್ಬರದ ಆತಂಕ ಮತ್ತು ದೀರ್ಘಕಾಲದವರೆಗೆ ಬಡ್ಡಿ ದರಗಳು ಹೆಚ್ಚಿರಲಿದೆ ಎಂಬ ನಿರೀಕ್ಷೆಗಳ ನಡುವೆ ಚಿನ್ನದ ಬೆಲೆಯು ಸಿಲುಕಿಕೊಂಡಿದೆ.
ದೀಪಾವಳಿ 2026ರ ಮುನ್ನ ಚಿನ್ನದ ಬೆಲೆ ಚೇತರಿಸಿಕೊಳ್ಳಲಿದೆಯೇ? ಖರೀದಿಸಲು ಇದು ಸರಿಯಾದ ಸಮಯವೇ?
‘ಎನ್ರಿಚ್ ಮನಿ’ (Enrich Money) ಸಿಇಒ ಪೊನ್ಮುಡಿ ಆರ್. (Ponmudi R) ಮಾತನಾಡಿ, “MCXನಲ್ಲಿ ಚಿನ್ನದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1,80,779 ರಿಂದ ಸುಮಾರು ₹38,600 ರಷ್ಟು ತಿದ್ದಪಡಿಯಾಗಿದ್ದು (Correction), ಇದು ಪ್ರಮುಖ ಬೆಂಬಲ ವಲಯವಾದ ₹1,40,000 ರ ಆಸುಪಾಸಿಗೆ ಮರಳಿದೆ. ಹೆಚ್ಚಿನ ಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಪದೇ ಪದೇ ವಿಫಲವಾಗಿರುವುದು ಮಾರಾಟದ ಒತ್ತಡ ಬಲವಾಗಿರುವುದನ್ನು ತೋರಿಸುತ್ತದೆ. ಆದಾಗ್ಯೂ, ಈ ಬೆಲೆ ಇಳಿಕೆಯು ಏಕಾಏಕಿ ದೊಡ್ಡ ಪ್ರಮಾಣದಲ್ಲಿ ಖರೀದಿಸುವ ಬದಲು, ಹಂತ ಹಂತವಾಗಿ ಚಿನ್ನವನ್ನು ಸಂಗ್ರಹಿಸಲು ಉತ್ತಮ ಅವಕಾಶ ನೀಡಬಹುದು” ಎಂದಿದ್ದಾರೆ.
ಭಾರತದಲ್ಲಿ ದೀಪಾವಳಿ ಮತ್ತು ಮದುವೆ ಸೀಸನ್ ಎಂದಿಗೂ ಭೌತಿಕ ಚಿನ್ನದ ಬೇಡಿಕೆಯನ್ನು ಬೆಂಬಲಿಸುತ್ತ ಬಂದಿದೆ ಎಂದು ಪೊನ್ಮುಡಿ ಗಮನಸೆಳೆದಿದ್ದಾರೆ. ಆದರೆ ಕೇವಲ ಹಬ್ಬದ ಖರೀದಿಯೊಂದೇ ಮಾರುಕಟ್ಟೆಯ ವಿಶಾಲ ಪ್ರವೃತ್ತಿಯನ್ನು (Trend) ಬದಲಿಸಲು ಸಾಕಾಗುವುದಿಲ್ಲ. ಅಂತಾರಾಷ್ಟ್ರೀಯ ಚಿನ್ನದ ಬೆಲೆಗಳು, ಅಮೆರಿಕದ ಬಡ್ಡಿ ದರ ನಿರೀಕ್ಷೆಗಳು, ಡಾಲರ್ ಬಲ ಮತ್ತು ಭೌಗೋಳಿಕ ರಾಜಕೀಯ ಬೆಳವಣಿಗೆಗಳೇ ಪ್ರಮುಖ ನಿರ್ಣಾಯಕ ಅಂಶಗಳಾಗಿರಲಿವೆ. ಜಾಗತಿಕವಾಗಿ ಚಿನ್ನದ ಬೆಲೆ ಒತ್ತಡದಲ್ಲಿದ್ದರೂ, ಭಾರತೀಯ ರೂಪಾಯಿ ದುರ್ಬಲಗೊಳ್ಳುವುದು ದೇಶೀಯ ಬೆಲೆಗಳಿಗೆ ಸ್ವಲ್ಪಮಟ್ಟಿಗೆ ರಕ್ಷಣೆ ನೀಡಬಹುದು.
ತಾಂತ್ರಿಕ ದೃಷ್ಟಿಕೋನದಿಂದ, ಅವರು ₹1,40,000 ಮಟ್ಟವನ್ನು ಗಮನಿಸಬೇಕಾದ ಪ್ರಮುಖ ವಲಯವೆಂದು ಗುರುತಿಸಿದ್ದಾರೆ. ಈ ಬೆಂಬಲ ಮಟ್ಟವನ್ನು ಉಳಿಸಿಕೊಂಡರೆ ದೀಪಾವಳಿಗೂ ಮುನ್ನ ಬೆಲೆಯು ₹1,48,000 ರಿಂದ ₹1,52,000 ರವರೆಗೆ ಚೇತರಿಸಿಕೊಳ್ಳಬಹುದು. ಆದರೆ ₹1,40,000 ಕ್ಕಿಂತ ಕೆಳಗೆ ಕುಸಿದರೆ, ಈ ಇಳಿಕೆಯು ₹1,38,000–₹1,36,000 ರವರೆಗೆ ಮುಂದುವರಿಯಬಹುದು. ಮಾರುಕಟ್ಟೆಯ ತಳಮಟ್ಟವನ್ನು (Bottom) ಊಹಿಸಲು ಹೋಗುವ ಬದಲು, ಜಾಗತಿಕ ಮಾರುಕಟ್ಟೆ ಪರಿಸ್ಥಿತಿ ಸುಧಾರಿಸಲು ಕಾಯುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.
ಮತ್ತೊಂದೆಡೆ, ‘ಚಾಯ್ಸ್ ಬ್ರೋಕಿಂಗ್’ನ ಕಮಾಡಿಟಿ ಮತ್ತು ಕರೆನ್ಸಿ ಅನಲಿಸ್ಟ್ ಆಮಿರ್ ಮಕ್ದಾ (Aamir Makda) ಮಾತನಾಡಿ, “ದಾಖಲೆ ಮಟ್ಟದ ಏರಿಕೆಯ ನಂತರ ಚಿನ್ನವು ತೀವ್ರ ತಿದ್ದುಪಡಿ ಹಂತಕ್ಕೆ ಪ್ರವೇಶಿಸಿದೆ. ಲಾಭಾಂಶ ನಗದೀಕರಣ (Profit-booking), ಬಲವಾದ ಯುಎಸ್ ಡಾಲರ್, ಸಡಿಲಗೊಳ್ಳುತ್ತಿರುವ ಭೌಗೋಳಿಕ ರಾಜಕೀಯ ಉದ್ವಿಗ್ನತೆ ಮತ್ತು ಬಾಂಡ್ ಇಳುವರಿ ಏರಿಕೆಯಿಂದಾಗಿ ಇದು ಸಂಭವಿಸಿದೆ” ಎಂದಿದ್ದಾರೆ.
ದೀಪಾವಳಿ 2026ರ ಕಡೆಗೆ ನೋಡಿದರೆ, ಹೂಡಿಕೆದಾರರು ಕೇಂದ್ರ ಬ್ಯಾಂಕ್‌ಗಳ ನೀತಿಗಳನ್ನು ಗಮನಿಸುತ್ತಿರುವುದರಿಂದ ಮತ್ತು ದೇಶೀಯವಾಗಿ ಬೆಲೆಗಳು ಹೆಚ್ಚಿರುವುದರಿಂದ ಚಿನ್ನವು ಸಮಾಧಾನಕರ ಹಂತದಲ್ಲಿರಬಹುದು ಅಥವಾ ಸ್ವಲ್ಪಮಟ್ಟಿಗೆ ಕುಸಿತದ ಧೋರಣೆಯನ್ನು ಕಾಯ್ದುಕೊಳ್ಳಬಹುದು ಎಂದು ಆಮಿರ್ ನಿರೀಕ್ಷಿಸಿದ್ದಾರೆ.
ಆದಾಗ್ಯೂ, ಕೇಂದ್ರ ಬ್ಯಾಂಕ್‌ಗಳ ನಿರಂತರ ಖರೀದಿ ಮತ್ತು ಹಣದುಬ್ಬರದ ವಿರುದ್ಧದ ಪ್ರಮುಖ ಅಸ್ತ್ರವಾಗಿರುವ ಕಾರಣದಿಂದ ಚಿನ್ನದ ದೀರ್ಘಕಾಲದ ಹೂಡಿಕೆಯ ಮೌಲ್ಯ ಗಟ್ಟಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಖರೀದಿದಾರರಿಗೆ ಸಲಹೆ:
ಹೊಸ ಖರೀದಿದಾರರಿಗೆ ಈ ಗಮನಾರ್ಹ ಬೆಲೆ ಇಳಿಕೆಯು ಹಬ್ಬದ ಸೀಸನ್‌ಗೆ ಮುಂಚಿತವಾಗಿ ಹೂಡಿಕೆಯನ್ನು ಹೆಚ್ಚಿಸಲು ಒಳ್ಳೆಯ ಅವಕಾಶವನ್ನು ನೀಡುತ್ತದೆ ಎಂದು ಆಮಿರ್ ನಂಬಿದ್ದಾರೆ. ಮಾರುಕಟ್ಟೆಯ ನಿಖರವಾದ ತಳಮಟ್ಟವನ್ನು ಅಳೆಯಲು ಪ್ರಯತ್ನಿಸುವುದಕ್ಕಿಂತ, ಮಾರುಕಟ್ಟೆ ದುರ್ಬಲವಾಗಿರುವಾಗ ಹಂತ ಹಂತವಾಗಿ ಚಿನ್ನವನ್ನು ಸಂಗ್ರಹಿಸುವುದು ಉತ್ತಮ ಹೂಡಕಾಡಿಕೆಯ ಕ್ರಮವಾಗಿದೆ ಎಂದು ಅವರು ಶಿಫಾರಸು ಮಾಡಿದ್ದಾರೆ.












