ಮುಂಬಯಿ: ಭಾರತೀಯ ಷೇರುಮಾರುಕಟ್ಟೆಯ ಇತಿಹಾಸದಲ್ಲೇ ಅತಿ ದೊಡ್ಡ ಐಪಿಒ ಖ್ಯಾತಿಯ ರಿಲಯನ್ಸ್ ಗ್ರೂಪ್ನ ‘ಜಿಯೋ ಪ್ಲಾಟ್ಫಾರ್ಮ್ಸ್’ ಐಪಿಒ, ಮಾರುಕಟ್ಟೆಯಲ್ಲಿ ಭಾರಿ ಸಂಚಲನವನ್ನೇ ಸೃಷ್ಟಿಸಿದೆ! ಬಿಡುಗಡೆಯಾದ ಕೇವಲ ಎರಡೇ ದಿನಗಳಲ್ಲಿ ಈ ಐಪಿಒ ಒಟ್ಟು 5.6 ಪಟ್ಟು ಅಧಿಕ ಚಂದಾದಾರಿಕೆಯನ್ನು ಗಳಿಸುವ ಮೂಲಕ ಹೊಸ ದಾಖಲೆಗೆ ಪಾತ್ರವಾಗಿದೆ.
ಹೂಡಿಕೆದಾರರಿಂದ ಹರಿದುಬರುತ್ತಿರುವ ಬೇಡಿಕೆಯನ್ನು ನೋಡಿದರೆ, ಇದು ಕೇವಲ ಒಂದು ಐಪಿಒ ಅಲ್ಲ, ಬದಲಿಗೆ ಭಾರತೀಯ ಮಾರುಕಟ್ಟೆಯ ಶಕ್ತಿ ಏನೆಂಬುದನ್ನು ಜಗತ್ತಿಗೆ ತೋರಿಸುವ ಮತ್ತೊಂದು ಹಬ್ಬದಂತಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.
ಎರಡೇ ದಿನಗಳಲ್ಲಿ ಆಂಕರ್ ಬುಕ್ ಬಿಡ್ಗಳನ್ನೂ ಸೇರಿಸಿ ಒಟ್ಟು ಐಪಿಒ ಬೇಡಿಕೆ ಬರೋಬ್ಬರಿ 3.73 ಲಕ್ಷ ಕೋಟಿ ರೂ. ಗಡಿ ದಾಟಿರುವುದು ವಿಶೇಷ.
ಲಭ್ಯವಿರುವ ಷೇರುಗಳಿಗೆ ಪ್ರತಿಯಾಗಿ, ಆಂಕರ್ ಹೂಡಿಕೆದಾರರಿಂದ ಬರೋಬ್ಬರಿ 110 ಕೋಟಿಗೂ ಅಧಿಕ ಷೇರುಗಳಿಗೆ ಬೇಡಿಕೆ ಬಂದಿದ್ದು, ಇದರ ಮೌಲ್ಯ 1.23 ಲಕ್ಷ ಕೋಟಿ ರೂ.ಗಳಷ್ಟಿದೆ.
ಈ ಐಪಿಒದ ಮತ್ತೊಂದು ವಿಶೇಷವೇನೆಂದರೆ, ದೊಡ್ಡ ಹೂಡಿಕೆದಾರರಿಂದ ಹಿಡಿದು ಸಾಮಾನ್ಯ ಉದ್ಯೋಗಿಗಳವರೆಗೆ ಪ್ರತಿಯೊಂದು ವಿಭಾಗದಲ್ಲೂ ಮುಗಿಬಿದ್ದು ಹೂಡಿಕೆ ಮಾಡಲಾಗಿದೆ. ಮಾರುಕಟ್ಟೆಯ ದೈತ್ಯರೆಂದೇ ಕರೆಯಲ್ಪಡುವ ಕ್ಯೂಐಬಿಗಳು ಮುಗಿಬಿದ್ದು ಬಂಡವಾಳ ಹೂಡಿದ್ದು, ಇವರ ವಿಭಾಗವು ಬರೋಬ್ಬರಿ 13.3 ಪಟ್ಟು ಹೆಚ್ಚಳವಾಗಿದ್ದು, 72,898 ಕೋಟಿ ರೂ.ಗಳ ಬಿಡ್ಗಳನ್ನು ಪಡೆದುಕೊಂಡಿದೆ.
ಅಸ್ತಿತ್ವದಲ್ಲಿರುವ ರಿಲಯನ್ಸ್ (ಆರ್ ಐಎಲ್) ಷೇರುದಾರರು ತಮ್ಮ ಜಿಯೋ ಮೇಲಿನ ವಿಶ್ವಾಸವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಈ ಕೋಟಾ 4 ಪಟ್ಟು ಭರ್ತಿಯಾಗಿ ಒಟ್ಟು 10,107 ಕೋಟಿ ರೂ.ಗಳಿಗೂ ಅಧಿಕ ಬೇಡಿಕೆ ಸೃಷ್ಟಿಸಿದೆ.
ಸಣ್ಣ ಮತ್ತು ಸಾಂಸ್ಥಿಕೇತರ ಹೂಡಿಕೆದಾರರ (ಎನ್ ಐ ಐ) ಈ ವಿಭಾಗದಲ್ಲಿ ಸುಮಾರು 6 ಪಟ್ಟು ಹೆಚ್ಚಿನ ಬೇಡಿಕೆ ಕಂಡುಬಂದಿದ್ದು, ಒಟ್ಟು 24,330 ಕೋಟಿ ರೂ.ಗಳ ಬಿಡ್ ಸಲ್ಲಿಕೆಯಾಗಿದೆ. ಚಿಲ್ಲರೆ ಹೂಡಿಕೆದಾರರ ವಿಭಾಗದಲ್ಲಿ ಸಾಮಾನ್ಯ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ರಿಟೇಲ್ ಕೋಟಾ 1.54 ಪಟ್ಟು ಅಧಿಕಗೊಂಡು 14,652 ಕೋಟಿ ರೂ.ಗಳ ಮೊತ್ತ ತಲುಪಿದೆ. ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಉದ್ಯೋಗಿಗಳೂ ಹಿಂದೆ ಬಿದ್ದಿಲ್ಲ; ಲಭ್ಯವಿರುವ ಷೇರುಗಳಿಗಿಂತ ಎರಡು ಪಟ್ಟು ಹೆಚ್ಚು ಅಂದರೆ 1,103 ಕೋಟಿ ರೂ.ಗಳ ಅರ್ಜಿಗಳನ್ನು ಸಲ್ಲಿಸುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.
ಮುಂಬರುವ ಪ್ರಮುಖ ದಿನಾಂಕಗಳು ಹೀಗಿವೆ. ಐಪಿಒ ಮುಕ್ತಾಯ ದಿನ: ಶುಕ್ರವಾರ, ಅಕ್ಟೋಬರ್ 23, 2026 ಆಗಿದೆ. ಷೇರು ಹಂಚಿಕೆ ಅಂತಿಮಗೊಳಿಸುವಿಕೆ, ಸೋಮವಾರ, ಅಕ್ಟೋಬರ್ 26, 2026 ಆಗಿದೆ. ಡಿಮ್ಯಾಟ್ ಖಾತೆಗೆ ಷೇರುಗಳ ಜಮೆ ಆಗುವ ದಿನ ಮಂಗಳವಾರ, ಅಕ್ಟೋಬರ್ 27, 2026 ಆಗಿದೆ. ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಅಥವಾ ನೋಂದಣಿಯಾಗುವ ದಿನವು ಬುಧವಾರ, ಅಕ್ಟೋಬರ್ 28, 2026 (ಬಿಎಸ್ ಇ ಮತ್ತು ಎನ್ ಎಸ್ ಇ) ಆಗಿದೆ.
ಮಾರುಕಟ್ಟೆಯಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಜಿಯೋ ಐಪಿಒ ಮಾರುಕಟ್ಟೆಗೆ ಕಾಲಿಡುವ ದಿನ ದಾಖಲೆಗಳನ್ನು ಮುರಿಯುತ್ತಾ ಅಥವಾ ಹೊಸ ಇತಿಹಾಸ ಸೃಷ್ಟಿಸುತ್ತಾ ಎಂಬುದನ್ನು ಕಾದು ನೋಡಬೇಕಿದೆ!












