ಪಿನ್ ಕೋರ್ ನ್ಯೂಸ್ ಡೆಸ್ಕ್ :
ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಕಷ್ಟ-ನಷ್ಟಗಳನ್ನು ಹಾಗೂ ಯಾರೂ ಕೇಳದ ಒಂದು ಕಥೆಯನ್ನು ಹೊತ್ತುಕೊಂಡು ಸಾಗುತ್ತಿರುತ್ತಾನೆ. ಕೆಲವೊಮ್ಮೆ ಆಕಸ್ಮಿಕವಾಗಿ ನಡೆಯುವ ಒಂದು ಮಾತುಕತೆ, ಮತ್ತೊಬ್ಬರ ಜೀವನದ ಒಳನೋಟಗಳನ್ನು ನಮಗೆ ಪರಿಚಯಿಸುವುದರೊಂದಿಗೆ ನಮ್ಮಲ್ಲಿ ಕರುಣೆಯನ್ನು ಮೂಡಿಸುತ್ತದೆ ಮತ್ತು ಜೀವನವನ್ನು ನೋಡುವ ದೃಷ್ಟಿಕೋನವನ್ನೇ ಬದಲಾಯಿಸಿಬಿಡುತ್ತದೆ. ಜಾರ್ಖಂಡ್ ಮೂಲದ ಮಹಿಳೆಯೊಬ್ಬರಿಗೆ ಕೇವಲ ₹200 ರೂ.ಗಳೊಳಗಿನ ರ್ಯಾಪಿಡೋ ಪ್ರಯಾಣದಲ್ಲಿ ಸಿಕ್ಕ ಇಂಥದ್ದೇ ಒಂದು ಅನುಭವ, ಪದವಿ ಮತ್ತು ದೊಡ್ಡ ಸಂಬಳದ ಉದ್ಯೋಗವೊಂದೇ ಸುಂದರ ಬದುಕಿಗೆ ಭರವಸೆಯಲ್ಲ ಎಂಬುದನ್ನು ಮನವರಿಕೆ ಮಾಡಿಕೊಟ್ಟಿತು. ಯಶಸ್ಸು ಎನ್ನುವುದು ಎಲ್ಲರಿಗೂ ಒಂದೇ ರೀತಿ ಇರಬೇಕೆಂದಿಲ್ಲ, ಅದರ ಅರ್ಥವೇ ಬೇರೆ.
ರ್ಯಾಪಿಡೋ ರೈಡರ್ನ ಆದಾಯ ಕೇಳಿ ಬೆಚ್ಚಿಬಿದ್ದ ಜಾರ್ಖಂಡ್ ಮಹಿಳೆ!
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ತನ್ನ ಅನುಭವದ ಪ್ರಕಾರ, ಆ ಮಹಿಳೆ ರ್ಯಾಪಿಡೋ ಬುಕ್ ಮಾಡಿ ಪ್ರಯಾಣಿಸುತ್ತಿದ್ದಾಗ ಚಾಲಕನೊಂದಿಗೆ ನಡೆದ ಸಂಭಾಷಣೆ ಆಕೆಯನ್ನು ಅಚ್ಚರಿಗೊಳಿಸಿತು. “ನಿಮ್ಮ ದಿನದ ಸಂಪಾದನೆ ಎಷ್ಟು?” ಎಂದು ಆಕೆ ಕೇಳಿದಾಗ, ಚಾಲಕ “₹4,000” ಎಂದು ಉತ್ತರಿಸಿದ್ದು ಆಕೆಗೆ ತೀವ್ರ ಆಶ್ಚರ್ಯ ತಂದಿತು!
ಆದರೆ, ಅದು ದಿನದ ಗಳಿಕೆಯೋ ಅಥವಾ ತಿಂಗಳ ಸಂಪಾದನೆಯೋ ಎಂದು ಆಕೆ ಮರುಪ್ರಶ್ನಿಸಿದಾಗ, ಆ ಚಾಲಕ ತಾನು ದಿನಕ್ಕೆ ₹4,000 ಸಂಪಾದಿಸುವುದಾಗಿ ಸ್ಪಷ್ಟಪಡಿಸಿದರು. ಇದರ ಬೆನ್ನಲ್ಲೇ ನಡೆದ ಮಾತುಕತೆಯು ಆದಾಯ, ವೃತ್ತಿಜೀವನ ಮತ್ತು ಯಶಸ್ಸಿನ ನಿಜವಾದ ಅರ್ಥದ ಬಗ್ಗೆ ಆಕೆಯಲ್ಲಿದ್ದ ಸಾಂಪ್ರದಾಯಿಕ ಕಲ್ಪನೆಗಳನ್ನೆಲ್ಲ ತಲೆಕೆಳಗಾಗಿಸಿತು.
ಕಡಿಮೆ ವೇತನ, ಗಗನಕ್ಕೇರುತ್ತಿರುವ ಹಣದುಬ್ಬರ ಮತ್ತು ಕಾಲಕ್ಕೆ ತಕ್ಕನಾಗಿ ಹೆಚ್ಚಾಗದ ಸಂಬಳದಿಂದಾಗಿ ಅದೆಷ್ಟೋ ಜನರು ಎದುರಿಸುತ್ತಿರುವ ಕಠಿಣ ಸತ್ಯವನ್ನು ಆ ಚಾಲಕ ಬಿಚ್ಚಿಟ್ಟರು. ತಾನೊಬ್ಬ ಮಾಜಿ ಇಂಜಿನಿಯರ್ ಆಗಿದ್ದು, ಹಿಂದೆ ತಿಂಗಳಿಗೆ ₹40,000 ಸಂಬಳ ಪಡೆಯುತ್ತಿದ್ದೆ ಆದರೆ ಅನಿವಾರ್ಯವಾಗಿ ಆ ಕೆಲಸ ಬಿಟ್ಟು ಬೇರೆ ಹಾದಿ ಹಿಡಿಯಬೇಕಾಯಿತು ಎಂದು ವಿವರಿಸಿದರು.
ಇಂಜಿನಿಯರ್ ಕೆಲಸ ಬಿಟ್ಟು ರ್ಯಾಪಿಡೋ ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ಇಂಜಿನಿಯರ್ ಕೆಲಸವನ್ನು ಬಿಟ್ಟಿದ್ದೇಕೆ ಎಂದು ಕೇಳಿದಾಗ, ₹40,000 ಸಂಬಳದಿಂದ ತನ್ನ ಕುಟುಂಬದ ಖರ್ಚು-ವೆಚ್ಚಗಳನ್ನು ನಿರ್ವಹಿಸುವುದು ಕಷ್ಟವಾಯಿತು, ಹಾಗಾಗಿ ಆ ಕೆಲಸ ಬಿಡಬೇಕಾಗಿ ಬಂತು ಎಂದು ಚಾಲಕ ವಿವರಿಸಿದರು. ವರ್ಷಗಟ್ಟಲೆ ಕಷ್ಟಪಟ್ಟು ಓದಿ, ಇಂಜಿನಿಯರ್ ಆದ ಮೇಲೆ ಅಷ್ಟು ಒಳ್ಳೆಯ ಕೆಲಸವನ್ನು ಬಿಡುವ ನಿರ್ಧಾರವನ್ನು ಹೇಗೆ ತೆಗೆದುಕೊಂಡಿರಿ ಎಂದು ಮಹಿಳೆ ಪ್ರಶ್ನಿಸಿದಾಗ, ಆ ರೈಡರ್ ನೀಡಿದ ಉತ್ತರ ಹೀಗಿತ್ತು:
“ಕುಟುಂಬದ ಅವಶ್ಯಕತೆಗಳನ್ನು ಪೂರೈಸುವುದೇ ನನಗೆ ಅತ್ಯಂತ ಮುಖ್ಯವಾಗಿತ್ತು. ಸಿಗುತ್ತಿದ್ದ ಸಂಬಳದಲ್ಲಿ ಸಂಸಾರವನ್ನು ಸರಿಯಾಗಿ ನಿರ್ವಹಿಸಲು ಸಾಧ್ಯವಾಗದಿದ್ದಾಗ ನಾನು ಬೇರೆ ಮಾರ್ಗವನ್ನು ಆರಿಸಿಕೊಂಡೆ. ಈಗ ನಾನು ನನ್ನದೇ ಸ್ವಂತ ಊರಿನಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ನನ್ನ ಸಂಪಾದನೆಯಿಂದ ಸಂತೋಷವಾಗಿದ್ದೇನೆ.”
ಹೊರರಾಜ್ಯಗಳಲ್ಲೋ ಅಥವಾ ಮಹಾನಗರಗಳಲ್ಲೋ ಬದುಕು ಕಟ್ಟಿಕೊಳ್ಳಲು ಹೆಣದಾಡುವ ಬಹುತೇಕ ವೃತ್ತಿಪರರ ಕನಸಿನಂತೆ, ಈಗ ತಾನು ತನ್ನ ಸ್ವಂತ ಊರಿನಲ್ಲೇ ಇದ್ದುಕೊಂಡು ನೆಮ್ಮದಿಯಾಗಿ ಸಂಪಾದನೆ ಮಾಡುತ್ತಿರುವುದಾಗಿ ಅವರು ಹೆಮ್ಮೆಯಿಂದ ನುಡಿದರು.
ತಮ್ಮ ಸುಂದರ ಬರಹವನ್ನು ಮುಕ್ತಾಯಗೊಳಿಸುತ್ತಾ ಆ ಮಹಿಳೆ ಹೀಗೆ ಬರೆದುಕೊಂಡಿದ್ದಾರೆ: “ಒಂದು ಉತ್ತಮ ಬದುಕನ್ನು ನಡೆಸಲು ದೊಡ್ಡ ಪದವಿ, ದೊಡ್ಡ ಕಂಪನಿ ಮತ್ತು ದೊಡ್ಡ ಸಂಬಳದ ಉದ್ಯೋಗವೇ ಅನಿವಾರ್ಯ ಎಂದು ನಾವು ನಂಬಿರುತ್ತೇವೆ. ಆದರೆ ಪ್ರತಿಯೊಬ್ಬರ ಪರಿಸ್ಥಿತಿಯೂ ಭಿನ್ನವಾಗಿರುತ್ತದೆ ಮತ್ತು ಯಶಸ್ಸಿನ ಅರ್ಥವೂ ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.”
=============












